ದಂಡಾವತಿಮಠ, ಗಂಗಾಧರಯ್ಯ ಶಂಕರಯ್ಯ
1900-1974. ಕರ್ನಾಟಕದ ಒಬ್ಬ ಪ್ರಸಿದ್ಧ ಕಲಾವಿದರು. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ. ತಂದೆ ಶಂಕರಯ್ಯ ದೈವಭಕ್ತರು. ತಾಯಿ ಗಂಗಾಬಾಯಿ ಗೊಂಬೆ ಮಾಡುವ ಕರಕುಶಲಿ. ತಂದೆ-ತಾಯಿ ಇಬ್ಬರಿಂದಲೂ ಕಲಾಸ್ಫೂರ್ತಿ ಪಡೆದರು. ಪ್ರಾಥಮಿಕ ಶಿಕ್ಷಣ ಮುಗಿದ ಅನಂತರ ಅಮ್ಮನ ಪಟ್ಟೆಹಾಕುವವೃತ್ತಿ (ವ್ಯಾಕ್ಸಿನೇಟರ್) ಕೈಗೊಂಡರು. ಕುಳ್ಳನೆಯ ಕುದುರೆ ಏರಿ ಹಳ್ಳಿಹಳ್ಳಿ ಸುತ್ತಿ ದೇವಿ ಹಾಕುತ್ತಿದ್ದರು. ತಿರುಗಾಟದಲ್ಲಿ ಕಂಡದ್ದನ್ನು ರೇಖೆಗಳಲ್ಲಿ ಬಿಡಿಸುವ ಹವ್ಯಾಸ ಬೆಳೆಯಿತು. ಒಮ್ಮೆ ಧಾರವಾಡದ ಪ್ರೌಢ ಶಾಲಾಚಿತ್ರಕಲಾಧ್ಯಾಪಕರಾಗಿದ್ದ ನೇರಳೇಕರ್ ಅವರಿಗೆ ತಾವು ಬರೆದ ಚಿತ್ರಗಳನ್ನು ತೋರಿಸಿದರು. ತುಂಬ ಮೆಚ್ಚಿಕೊಂಡ ಅವರು ಕಲಾಪರೀಕ್ಷೆಗೆ ಕುಳಿತುಕೊಳ್ಳುವಂತೆ ಸಲಹೆ ಮಾಡಿದರು. ಕೆಲಸಕ್ಕೆ ರಾಜೀನಾಮೆ ನೀಡಿ ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು. ಮುಂಬಯಿಯ ಕಲಾಶಾಲೆಯನ್ನು ಸೇರಬೇಕೆಂಬ ಆಸೆ ಉಂಟಾಯಿತು. ರೈತಾಪಿ ತಂದೆಗೆ ಅಲ್ಲಿಯ ವೆಚ್ಚವನ್ನು ಕೊಡುವ ಶಕ್ತಿ ಇರಲಿಲ್ಲ. ಆದರೂ ದೃಢ ಮನಸ್ಸಿನಿಂದ ಮುಂಬಯಿಗೆ ನಡೆದರು. ಕನ್ನಡಿಗ ವ್ಯಾಪಾರಿ ಗಂಗಾಧರಪ್ಪ, ಸಂಗಪ್ಪ, ಸಾಬೋಜಿ -ಇವರು ಸಹಾಯಕ್ಕೆ ಮುಂದೆ ಬಂದರು. 

ಮುಂಬಯಿಯ ಜೆ. ಜೆ. ಕಲಾಶಾಲೆಯನ್ನು ಸೇರಿದರು(1923). 1928 ರಲ್ಲಿ ಇವರ ತಂದೆ ಕಾಲವಾದರು. ಎರಡು ವರ್ಷಗಳಲ್ಲಿ ತಾಯಿಯೂ ತೀರಿಕೊಂಡರು. ಅಭ್ಯಾಸಕ್ಕೆ ಕೊಂಚ ಅಡ್ಡಿ ಬಂತು. ಆದರೂ 1931 ರಲ್ಲಿ ಡಿಪ್ಲೊಮಾ ಪಡೆದರು. ಇದೇ ಸಮಯದಲ್ಲಿ ಇಂಗ್ಲೆಂಡಿನ ರಾಯಲ್ ಅಕಾಡಮಿಯಲ್ಲಿ ಕಲಾಶಿಕ್ಷಣ ಮುಗಿಸಿ ಬಂದ ಬಡಿಗೇರ ಮತ್ತು ವಿ. ಆರ್. ರಾವ್ ಇವರು ಮುಂಬಯಿಯಲ್ಲಿ `ನೂತನ ಕಲಾಮಂದಿರವನ್ನು ಸ್ಥಾಪಿಸಿದರು. ಈ ಕಲಾಮಂದಿರದಲ್ಲಿ ಸಹಾಯಕ ಕಲಾ ಶಿಕ್ಷಕ ವೃತ್ತಿಯನ್ನು ಕೈಗೊಂಡರು(1932). ಬಡಿಗೇರರು ಮುಂಬಯಿ ಚಿತ್ರಕಲಾ ಪರೀಕ್ಷೆಗಳ ಅಧಿಕಾರಿಗಳಾದಾಗ (1933) ಕಲಾಮಂದಿರದ ನಿರ್ವಹಣೆಯ ಜವಾಬ್ದಾರಿ ರಾವ್ ಮತ್ತು ಇವರ ಮೇಲೆ ಬಿತ್ತು. ಅನಂತರ ರಾವ್ ಲಂಡನ್ನಿಗೆ ತಮ್ಮ ಪತ್ನಿ ಸಮೇತ ಅಲ್ಲಿಯೇ ನೆಲೆಸಲು ತೆರಳಿದಾಗ ಇವರೇ ಶಾಲೆಯನ್ನು ನಡೆಸಲು ಮುಂದಾದರು. ಕೇವಲ ನಾಲ್ಕೆ ನಾಲ್ಕು ಕಲಾ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಲಾಮಂದಿರದಿಂದ ಮೂವತ್ತು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೊರಬಂದಿದ್ದಾರೆ. ಕೆಲವರು ವಿಶ್ವವಿಖ್ಯಾತರಾಗಿದ್ದಾರೆ.

ಕೆ. ಕೆ. ಹೆಬ್ಬಾರ್, ಲಕ್ಷ್ಮಣ ಪೈ, ಅಲಮೇಲಕರ್, ಝಾ, ಎಸ್. ಎಂ. ಪಂಡಿತ್ - ಮೊದಲಾದ ಖ್ಯಾತ ಕಲಾವಿದರು ಇದೇ ಕಲಾ ಮಂದಿರದ ಕುಲುಮೆಯಲ್ಲಿ ಕಾದು ರೂಪಗೊಂಡವರು.

1932 ರಿಂದ 1940 ರ ವರೆಗೆ ಇವರು ಕರ್ನಾಟಕದ ಆರ್ಟ್ ಸೊಸೈಟಿಯ ಕಾರ್ಯದರ್ಶಿಗಳಾಗಿದ್ದರು ಮುಂಬಯಿಯ ಆರ್ಟ್ ಇನ್‍ಸ್ಟಿಟ್ಯೂಟ್ ಫೆಡರೇಷನ್ ಅಧ್ಯಕ್ಷರಾಗಿಯೂ ದುಡಿದದ್ದುಂಟು. ಕಾಶಿ ಹಿಂದೂ ವಿಶ್ವವಿದ್ಯಾಲಯದ ಕಲಾ ವಿಭಾಗದ ಶಾಲೆಗೆ ಶಿಕ್ಷಕರನ್ನು ಆರಿಸುವ ಅಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದ ಇವರು ಸಮ್ಮಿಶ್ರ ಮುಂಬಯಿ ರಾಜ್ಯದ ಚಿತ್ರಕಲಾ ಪರೀಕ್ಷೆಗಳ ಸುಧಾರಕ ಹಾಗೂ ಪರೀಕ್ಷಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದರು.

ಇವರ ಕಲೆಗಾರಿಕೆ ಬಹು ಬೆಲೆಯುಳ್ಳದ್ದು. ತೈಲವರ್ಣದ ರೂಪ ಚಿತ್ರ ರಚನೆಯಲ್ಲಿ ಇವರ ಕುಂಚ ಉತ್ತಮ ಸಾಧನೆ ಗಳಿಸಿದೆ. ಕಲ್ಕತ್ತ, ಮುಂಬಯಿ, ಮದ್ರಾಸು, ಮೈಸೂರು ಕಲಾಪ್ರದರ್ಶನಗಳಲ್ಲಿ ಇವರ ಕೃತಿಗಳಿಗೆ ಅನೇಕ ಬಹುಮಾನಗಳು ಬಂದಿವೆ. ಇವರ ಚಿತ್ರಕ್ಕೆ ಕರ್ನಾಟಕ ಆರ್ಟ್ ಸೊಸೈಟಿಯ ಸುವರ್ಣ ಪದಕವೂ ದೊರೆಯಿತು (1935).
ಇವರು ಉದಾರಿಯೂ ಸರಳ ಜೀವಿಯೂ ಆಗಿದ್ದರು. ಉನ್ನತ ಗುಣ ಸಂಪನ್ನರಾದ್ದರಿಂದ ಇವರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದರು. 

ಕಲಾವೃತ್ತಿಯಿಂದ ನಿವೃತ್ತರಾದಾಗ (1966) ಇವರನ್ನು ಮುಂಬಯಿಯ ಕಲಾಮಂದಿರದ ಅಪಾರ ವಿದ್ಯಾರ್ಥಿ ಕಲಾವೃಂದ ಸನ್ಮಾನಿಸಿ ಗೌರವಿಸಿತು. ಅಲ್ಲಿಂದ ಬಂದ ಅನಂತರ ಧಾರವಾಡದಲ್ಲಿ ತಮ್ಮ ಸ್ವಗೃಹದಲ್ಲಿ ಶಾಂತಚಿತ್ತರಾಗಿ ಕಲಾಮಯ ಜೀವನವನ್ನು ಮುಂದುವರಿಸಿದ್ದರು. ಕರ್ನಾಟಕದಿಂದ ದೂರವಿದ್ದುಕೊಂಡೇ ಬಹಳ ವರ್ಷ ಇವರು ಚಿತ್ರಕಲೆಗೆ ಅಮೋಘವಾದ ಕಲಾಸೇವೆ ಸಲ್ಲಿಸಿದರು.											
(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ